ಕನ್ನಡದಲ್ಲಿ ಇದು ನನ್ನ ಮೊದಲ ಬರಹ. ಎಂದೂ ಬರೆದಿಲ್ಲವೆಂದಲ್ಲ, ಹೈ ಸ್ಕೂಲ್ ವರೆಗೂ ಕನ್ನಡ ತೃತೀಯ ಭಾಷೆಯಾಗಿತ್ತು, ಹಾಗಾಗಿ ವ್ಯಾಕರಣ, ಪ್ರಬಂಧ , ಕಥೆಗಳು, ಪದ್ಯ ಹೀಗೆ ಕನ್ನಡ ಅಧ್ಯಯನ. ಹೈ ಸ್ಕೂಲ್ ನಂತರ ಇವಕ್ಕೆಲ್ಲಾ ಸ್ವಲ್ಪ ವಿರಾಮ. ಹಾಗೆಂದು ಅಲ್ಲಿಗೆ ‘ಫುಲ್ ಸ್ಟಾಪ್’ ಏನಲ್ಲ. ಕನ್ನಡ ಪುಸ್ತಕ ಓದುವುದೆಂದರೆ ನನಗೆ ತುಂಬಾ ಇಷ್ಟ. ನಾನು ಓದಿದ ಮೊದಲ ಪುಸ್ತಕ ಶಿವರಾಂ ಕಾರಂತರ ‘ಬೆಟ್ಟದ ಜೀವ’. ಓದಿನಲ್ಲಿ ಕನ್ನಡ ಉಳಿಯಿತು. ಬರಹದಲ್ಲಿ ಮಾಸಿತು. ಇಲ್ಲಿ ಕೆಲವು ಆಂಗ್ಲ ಪದಗಳ ಬಳಕೆ ಮಾಡಿರುವೆ, ಕನ್ನಡ ಬರಲ್ಲ ಅಂತಲ್ಲ, ಸುಮ್ನೆ ‘ಇಟ್ ಸೌಂಡ್ಸ್ ಬೆಟರ್ ಅಂಡ್ ಫನ್ನಿ’
ಏನು ಬರೆಯುವುದೆಂದು ಯೋಚಿಸಿದಾಗ ಹೊಳೆದದ್ದು ಚಿಕ್ಕಂದಿನಲ್ಲಿ ನನ್ನ ಅಜ್ಜಿ ಮನೆಗೆ ಹೋಗುತ್ತಿದ್ದ ಪ್ರವಾಸ. ನನ್ನ ತಾಯಿ ತಂದೆ ತೀರ್ಥಹಳ್ಳಿಯವರು. ನಾನು ಹುಟ್ಟಿದ್ದು ಬೆಳೆದದ್ದು ಬೆಂಗಳೂರಿನಲ್ಲಿ. ಹಾಗಾಗಿ ನಾನು ಬೆಂಗಳೂರು ಹುಡುಗಿ. ಚಿಕ್ಕಂದಿನಲ್ಲಿ ಪ್ರತಿ ವರ್ಷ ಬೇಸಿಗೆ ರಜೆಗೆಂದು ಅಜ್ಜಿ ಮನೆಗೆ ಹೋಗುವುದು. ರಾತ್ರಿ ಹತ್ತೂವರೆ ಅಥವಾ ಹನ್ನೊಂದರ ಕ. ರಾ . ರ . ಸಾ . ನಿ ಬಸ್ಸು. ಅಪ್ಪನಿಗೆ ಒಂದು ಬೈ ಹೇಳಿ ಕಿಟಕಿಯಿಂದಾಚೆ ಇತರೇ ಜನ, ಇತರರ ಜೀವನ ನೋಡುತ್ತ ನನ್ನ ಲೋಕದಲ್ಲಿ ಕೂರುವುದು. ಅದರ ಮಧ್ಯೆ ಸಿಗರೆಟ್ ಹೋಗೆ, ಬಸ್ಸಿನ ಹೋಗೆ, ಟಾಯ್ಲೆಟ್ ವಾಸನೆ ಹೊಟ್ಟೆಯಲ್ಲಿ ವಾಕರಿಕೆ. ಪುಣ್ಯಕ್ಕೆ ಅಮ್ಮನ ಕೈಲಿ ಅಡಿಕೆಯನ್ನು ಬಾಯಲ್ಲಿ ಚೀಪುವುದು. ಅಬ್ಬ ಈ ಮೆಜೆಸ್ಟಿಕ್ ದರಿದ್ರ ಎಂದು ಮನಸ್ಸಿನಲ್ಲಿ ಬಯ್ಯುವುದು. ಟೈಮ್ ಪರವ ಇಲ್ಲ ಈ ಬಸ್ ಡ್ರೈವರ್ ಕಂಡಕ್ಟರ್ ಗೆ. ಹತ್ತೂವರೆ ಅಂದ್ರೆ ಹತ್ತುವರೆಗೆ ಹೊರಡಲ್ಲ, ಅವರದೇ ಸಮಯ. ನನಗೆ ಬೆಂಗಳೂರು ಬಿಟ್ಟರೆ ಸಾಕು. ಕಾದೂ ಕಾದು ಕೊನೇಗೆ ಬಂದ ಈ ಡ್ರೈವರ್ ಬೇಡಿ ಸೇದ್ಕೊಂಡು, ಕಂಡಕ್ಟರ್ ತನ್ನ ಕೆಂಪು ಎಲೆ-ಅಡಿಕೆ ಜಗಿದ ಬಾಯಲ್ಲಿ ಟಿಕೆಟ್ ಎಂದು ಕೇಳ್ತಾನೆ. ಥೂ ವ್ಯಾಕ್.
ಸರಿ ಎಲ್ಲ ಚೆಕ್ಕಿಂಗ್ ಆಯ್ತು, ಪೋಮ್ ಪೋಮ್ ಅಂತ ಬಸ್ ಹೊರಟಿತು. ಹಾಹ ಒಳ್ಳೆ ಗಾಳಿ, ವಾಸನೆಯಿಂದ ಬಿಡುಗಡೆ. ಹೊಟ್ಟೆ ಸ್ವಲ್ಪ ಓಕೆ. ಬೆಂಗಳೂರು ಸ್ವಲ್ಪ ದಾಟಿದ ಮೇಲೆ ಲೈಟ್ಸ್ ಸ್ವಿಚ್ ಆಫ್. ಜನರು ಮಲಗುವ ಸಮಯ, ಅಂಗಡಿ ಬಾಗಿಲು ಮುಚ್ಚಿ ಮನೆಗೆ ತೆರಳುತ್ತಿರುವ ಸೀನ್, ಮನಗೆ ಬಾಗಿಲು ಹಾಕಿ ನಿದ್ರಾ ದೇವಿಯ ಶರಿಣಿಗೆ ಹಾತೊರೆಯುತ್ತಿರುವ ಜನ. ನಿಧಾನವಾಗಿ ಮನೆ ಮುಂಗಟ್ಟು ಕಡಿಮೆಯಾಗುವುದು. ಸರಿ ಬೆಂಗಳೂರು ಬಿಟ್ಟೆವೆಂದು ಅರ್ಥ. ನನಗೂ ನಿದ್ದೆ, ಕಣ್ಣು ಮುಚ್ಚಿ ಮುಚ್ಚಿ ಬರುವುದು. ಕೊನೆಗೂ ಶಾಲ್ ಹೊದ್ದು ನಿದ್ದೆ.
ಮತ್ತೆ ಎಚ್ಚರವಾದಾಗ ಅರಸೀಕೆರೆಯಲ್ಲಿ ಬ್ರೇಕ್. ಒಳ್ಳೆ ನಿದ್ದೆ ಹಾಳಾಯ್ತು. ಅಮ್ಮ ಬಾತ್ರೂಮ್ ಗೆ ಹೋಗ್ತೀಯ ಅಂತ ಕೇಳ್ತಾಳೆ, ಅಯ್ಯೋ ಇಲ್ಲ. ಮತ್ತೆ ಸ್ವಲ್ಪ ಹೊತ್ತಿಗೆ ಬಸ್ ಹೊರಡುವುದು. ಹಾಗೆ ಆಚೆ ನೋಡ್ತಾ ನೋಡ್ತ ದೂರದಲ್ಲೊಂದು ದೀಪ. ನಿರ್ಜನ ಪ್ರದೇಶ,ಇಲ್ಲಿ ಯಾರು ವಾಸಿಸುತ್ತಾರೆ, ಏನು ಕೆಲಸ ಮಾಡ್ತಾರೆ, ಅಕ್ಕಿ ಬೇಳೆ ಇತರೆ ಶಾಪಿಂಗ್ ಗೆ ಎಲ್ಲಿ ಹೋಗ್ತಾರೆ, ಇಲ್ಲಿ ಇರಲು ಬೋರ್ ಆಗಲ್ವ, ಅಂತ ನಂಗೆ ಯೋಚನೆ. ಯೋಚಿಸುತ್ತ ಅಲ್ಲೇ ನಿದ್ದೆಗೆ ಜಾರುವುದು.
ಬೆಳಿಗ್ಗೆ ಸುಮಾರು ಐದು ಘಂಟೆಗೆ ಎಚ್ಚರವಾದಾಗ ಶಿವಮೊಗ್ಗದಲ್ಲಿ. ಅರೆ ಆಗ್ಲೇ ಇಷ್ಟೊಂದು ಜನ, ಐದು ಘಂಟೆ ನಲ್ಲೂ ಜನ ಕೆಲಸ ಮಾಡ್ತಾರ ಅಂತ ನಂಗೆ. ದಿನಪತ್ರಿಕೆ ಜೋಡಿಸಿ ಬಸ್ಸಿಗೆ ಹಾಕುತ್ತಿರುವರು, ಹೂವು ಜೋಡಿಸಿ ಸೈಕಲ್ ಮೇಲೆ ಇಡುವರು, ಕಾಫಿ ಟೀ ಮಾರುವರು, ಇನ್ನೂ ಕೆಲವರು ಆಗಲೇ ಎದ್ದು ಮನೆ ಸಾರಿಸುತ್ತಿರುವರು. ಇವೆಲ್ಲ ನೋಡಲು ನಂಗೆ ತುಂಬಾ ಇಷ್ಟ, ಕುತೂಹಲ. ಬೇರೆ ಊರಿನಲ್ಲಿ ಜನ ಹೇಗೆ ವಾಸಿಸುತ್ತಾರೆ, ಏನು ಅವರ ಜೀವನ ಶಯ್ಲಿ ಅಂತ. ಅಮ್ಮ ಇನ್ನೂ ತೀರ್ಥಹಳ್ಳಿಗೆ ಎಷ್ಟು ದೂರ? ಇನ್ನೂ ಒಂದು ಘಂಟೆ ಇದೆ, ಸರಿ ಮತ್ತೆ ಮಲಗುವ.
ಎಳೆ ಬಿಸಿಲು, ಹಸಿರು ಗಿಡ ಮರ, ಆಗ ತಾನೇ ನಿಂತಿದೆಯೋ ಅಥವಾ ರಾತ್ರಿಯೋ ಬಂದು ನಿಂತ ಮಳೆ, ಎಲ್ಲ ಎಷ್ಟು ಎಳಸು. ಹೆಂಗಸರು ತಲೆ ಮೇಲೊಂದು ಸೊಂಟದ ಮೇಲೊಂದು ನೀರಿನ ಕೊಡ, ಕಾಲಿಗೆ ಚಪ್ಪಲಿ ಇಲ್ಲ, ರಸ್ತೆ ಯೇನು ಬೆಂಗಳೂರಿನ ಥರ ಡರ್ಟಿ ಇಲ್ಲ. ಅಡಿಕೆ ಬಾಳೆ ಹಲಸಿನ ಮರ. ಎಲ್ಲೆಲ್ಲೂ ಮರ, ಹಚ್ಹ ಹಸಿರು. ಸರಿ ಮಲೆನಾಡು ಬಂತು. ಕಿಟಕಿ ತೆಗೆದರೆ ತಣ್ಣನೆ ಗಾಳಿ ಸವಿಯುತ್ತ ಸವಿಯುತ್ತ ಬಂತು ತೀರ್ಥಹಳ್ಳಿ. ನಿಧಾನವಾಗಿ ಇನ್ನೇನು ಶುರು ಆಗುತ್ತಿರುವ ಜನ ಜೀವನ, ಯಾರಿಗೂ ಆತುರ ಇಲ್ಲ, ಸೈಕಲ್ ಮೇಲೆ ಮಕ್ಕಳನ್ನು ಕರೆದುಕೊಂಡು ಸ್ಕೂಲ್ ಗೆ ಸವಾರಿ. ರಸ್ತೆ ಎಲ್ಲ ವದ್ದೆ. ಒಳ್ಳೆ ಗಾಳಿ, ಹೊಗೆ ಇಲ್ಲ , ತಂಗಾಳಿ, ಎಷ್ಟು ಲಕ್ಕಿ ಈ ಜನ. ನನ್ನನ್ನು ನೋಡಿ ಅವರಿಗೆ ಅನ್ನಿಸುವುದೋ ಏನೊ ನಾನು ಪಟ್ಟಣದ ಹುಡುಗಿ ಅಂತ, ಅಲ್ಲೇ ಒಂದು ಸ್ಮೈಲ್ , ನಾನು ಸ್ಮಿಲಿಂಗ್ ಬ್ಯಾಕ್ !
ಸರಿ ದುರ್ಗಂಬ ಬಸ್ ಬಂತು, ಹತ್ತಿ ಊರಿಗೆ ಪಯಣ.
ಒಹ್ ಇ ಲವ್ಡ್ ಇಟ್ 😉